ತುಳು ಭಾಷೆ -
ದಕ್ಷಿಣಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದು; ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದೆ. ಪಶ್ಚಿಮ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಭಾಗ ತುಳುನಾಡು. ಕಾರ್ಕಳ, ಉಡುಪಿ, ಮಂಗಳೂರು, ಪುತ್ತೂರು, ಬಂಟ್ವಾಳ, ಕುಂದಾಪುರ ಮತ್ತು ಸುಳ್ಯ ತಾಲ್ಲೂಕುಗಳ ಅಧಿಕ ವಿಸ್ತೀರ್ಣಗಳಲ್ಲಿ ತುಳುವೇ ಜನರ ತಾಯ್ನುಡಿ. ಈಗ ಕೇರಳದಲ್ಲಿ ಸೇರಿರುವ ಕಾಸರಗೋಡು ತಾಲ್ಲೂಕಿನ ಅನೇಕ ಗ್ರಾಮಗಳು ತುಳುನೆಲವಾಗಿವೆ. 1971 ರ ಜನಸಂಖ್ಯಾ ಗಣಿತಿಯಂತೆ ತುಳುವರ ಸಂಖ್ಯೆಸುಮಾರು 9 ಲಕ್ಷ.

ತುಳು ಪದದ ವ್ಯುತ್ಪತ್ತಿಯನ್ನು ಹೇಳುವುದು ಕಷ್ಟ. ಈ ಪದಮೃದುತ್ವವನ್ನು ಸೂಚಿಸುತ್ತದೆ. ಆದುದರಿಂದ ಬಹಳ ವಿನಯವಂತರೂ ಮೃದು ಭಾವದವರೂ ಆದ ತುಳುವರ ಮಾತನ್ನು ತುಳು ಎನ್ನುತ್ತಾರೆ ಎಂಬುದಾಗಿ ಕೆಲವರು ಹೇಳುವುದುಂಟು. ಪ್ರಾಯಃ ಇದು ಅಭಿಮಾನದ ವಿವರಣೆಯಿರಬಹುದು. ಕ್ರಿಸ್ತಶಕದ ಆದಿಕಾಲದ ಕೃತಿಗಳೆಂಬುದಾಗಿ ಹೇಳಲ್ಪಡುವ ತಮಿಳು ಸಂಗಂ ಕಾವ್ಯಗಳಲ್ಲಿ ತುಳುವ ದೇಶದ ಆತಿಥ್ಯವನ್ನು ಪ್ರಶಂಸನೆ ಮಾಡಿರುವುದರಿಂದ ತುಳುವಿನ ಪ್ರಾಚೀನತೆಯ ವಿಷಯ ಸ್ಪಷ್ಟವಿದೆ.

ತುಳು ಬಹಳ ಅಭಿವೃದ್ಧಿಗೊಂಡ ಭಾಷೆ. ಅದರ ಭಾಷಾ ಭಂಡಾರದಲ್ಲಿ ಶಬ್ದ ಸಂಪತ್ತು ತುಂಬಿಕೊಂಡಿದೆ. ತಮಿಳು, ಕನ್ನಡ, ತೆಲುಗು, ಮಲೆಯಾಳಂಗಳೆಂಬ ಪ್ರಸಿದ್ಧ ದ್ರಾವಿಡ ಭಾಷೆಗಳ ಶಬ್ದಗಳಿಗೆ - ಬಹಳಮಟ್ಟಿಗೆ ಎಲ್ಲ ಶಬ್ದಗಳಿಗೆ-e್ಞÁತಿ ಶಬ್ದಗಳು ತುಳುವಿನಲ್ಲಿ ಇದ್ದೇ ಇದೆ. ಇವುಗಳ ನಡುವೆ ವಿಶಿಷ್ಟ ಧ್ವನಿಸಾದೃಶ್ಯ ನಿಯಮವನ್ನೂ ಕಾಣಬಹುದು. ಉದಾಹರಣೆಗೆ - ಇತರ ದ್ರಾವಿಡಭಾಷೆಗಳ ಲ-ಕಾರ ಇಲ್ಲಿ ರ-ಕಾರವಾಗುತ್ತದೆ.

ಕನ್ನಡ 	ತಮಿಳು 	ತುಳು
ತಲೆ 	ತಲೈ	ತರೆ
ಕಾಲ್ 	ಕಾಲ್ 	ಕಾರ್
ಬಿಲ್ 	ವಿಲ್ 	ಬಿರು

ಕೊನೆಯ ಉದಾಹರಣೆಯಲ್ಲಿ ವ-ಕಾರ ಬ-ಕಾರವಾದುದನ್ನು ಕನ್ನಡ-ತುಳುಗಳಲ್ಲಿ ಕಾಣುತ್ತೇವೆ. ಈ ಬ-ಕಾರ ಪರಿವರ್ತನೆಯ ಇತ್ಯಾದಿ ಕೆಲವು ವಿಶಿಷ್ಟತೆಗಳಿಂದ ತುಳು ಕನ್ನಡಕ್ಕೆ ಹೆಚ್ಚಿನ ಸಮೀಪದ ಭಾಷೆ ಎನ್ನಲಾಗಿದೆ.

ತುಳು ಒಂದು ಕೋಮುಭಾಷೆಯಲ್ಲ. ಅದು ನಾಡನುಡಿ. ಅದನ್ನು ಆಡುವವರು ಬಂಟ, ಗೌಡ, ಜೈನ, ಆದಿದ್ರಾವಿಡ, ಕ್ರೈಸ್ತ, ಬ್ರಾಹ್ಮಣ, ಗಾಣಿಗ, ಮೂಲ್ಯ, ಮೊದಲಾದ ಎಲ್ಲ ಕೋಮಿನವರು.

ಐತಿಹಾಸಿಕ ರಾಜಕೀಯ ಕಾರಣಗಳಿಂದಿರಬಹುದು, ತುಳುವಿನಲ್ಲಿ ಅಷ್ಟು ಸಾಹಿತ್ಯನಿರ್ಮಾಣಕಾರ್ಯ ನಡೆಯಲಿಲ್ಲ ಎಂದೆಂದೂ ತುಳುನಾಡು ಕನ್ನಡರಾಜ್ಯದ ಅಧಿಕಾರ ಕ್ಷೇತ್ರಕ್ಕೆ ಸೇರಿತ್ತು.

ತುಳುವಿನಲ್ಲಿ ಅತ್ಯುತ್ತಮ ಜನಪದಗೀತೆಗಳಿವೆ. ಪಾಡ್ದನಗಳೆಂಬ ಐತಿಹಾಸಿಕ ಗಾಥಾಗಳಿವೆ. ಕೋಟೆ ಚೆನ್ನಯ ಅಂಥದ್ದೊಂದು. ಭೂತದಕೋಲೆಂಬ ಸಂಗೀತನೃತ್ಯ ಕಾರ್ಯಕ್ರಮ ಐತಿಹಾಸಿಕ ಧಾರ್ಮಿಕ ಸಾಮಾಜಿಕ ಸಂಸ್ಕøತಿಗಳ ಸಮ್ಮಿಶ್ರಣದ್ದಾಗಿದೆ.
ತುಳು ದೇಶ್ಯಪದಗಳ ಒಂದು ವಿಹಂಗಮ ಅವಲೋಕನದಿಂದ ಪ್ರಾಚೀನ ತುಳುವರ ಸಂಸ್ಕøತಿಯ ಚಿತ್ರ ನಮ್ಮ ಮುಂದೆ ನಿಲ್ಲುತ್ತದೆ. ಅವರ ಸುಂದರ ಸರಳ ಜೀವನವನ್ನು ಆದರಿಂದ ಅರಿತುಕೊಳ್ಳಬಹುದು.

ಇಲ್(ಮನೆ), ನೆಲ, ಒಕ್ಕೇಲ್ (ಬೇಸಾಯಗಾರ), ಒಕ್ಕು, ಗೆಯ್ಮೆ, ಕಯ್ಕಂಜಿ (ಜಾನುವಾರು) ಮೊದಲಾದ ಶಬ್ದಗಳು ಅವರಿಗೆ ಮನೆಮಾರುಗಳಿದ್ದವು. ಅವರು ನೆಲವನ್ನು ಉತ್ತು ಬೇಸಾಯ ಮಾಡುತ್ತಿದ್ದರು. ದನಕರುಗಳ ಸಂಪತ್ತನ್ನು ಪಡೆದವರಾಗಿದ್ದರು- ಎಂಬುದನ್ನು ಸಾರುತ್ತದೆ. ಕರ್ಬೊ (ಕಬ್ಬಿಣ), ಬೊಳ್ಳಿ (ಬೆಳ್ಳಿ) ಇತ್ಯಾದಿ ಲೋಹಗಳ ಪರಿಚಯ ಅವರಿಗಿತ್ತು. ಓದುನಿ, ಬರೆಪುನಿ, ಎಣ್ಣುನಿ- ಇತ್ಯಾದಿ ಶಬ್ದಗಳು ಪ್ರಾಚೀನ ತುಳು ಜನ ಓದು ಬರಹ ಬಲ್ಲವರು, ಲೆಕ್ಕ ಮಾಡಬಲ್ಲವರು ಎಂಬುದನ್ನು ಹೇಳುತ್ತವೆ.
(ಎಂ.ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ